ಕಾರ್ಮಿಕರಿಗೆ ಸರಕಾರದ ಯೋಜನೆ ತಲುಪಿಸುವ ಗುರಿ: ಲಾಡ್

ಕಾರ್ಮಿಕರಿಗೆ ಸರಕಾರದ ಯೋಜನೆ ತಲುಪಿಸುವ ಗುರಿ: ಲಾಡ್ Aim to deliver government schemes to workers: Lad

ಬಾಗಲಕೋಟೆ 23:  ರಾಜ್ಯದಲ್ಲಿಯೇ ಸಂಘಟಿತ ಮತ್ತು ಅಸಂಘಟಿತ ಅಲೇಮಾರಿ ಕಾರ್ಮಿಕರೆಲ್ಲರಿಗೂ ಸರಕಾರದಿಂದ ಸಿಗುವ ಪ್ರತಿಯೊಂದು ಸೌಲಭ್ಯಗಳನ್ನು ಒದಗಿಸುವ ಗುರಿ ಹೊಂದಲಾಗಿದೆ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಹೇಳಿದರು. 

ನವನಗರದ ಕಲಾಭವನದಲ್ಲಿ ಬುಧವಾರ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ, ಸಾರಿಗೆ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಸಹಯೋಗದಲ್ಲಿ ಹಮ್ಮಿಕೊಂಡ ವಿವಿಧ ವರ್ಗಗಳ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ ಕಾರ್ಡ ವಿತರಣೆ ಹಾಗೂ ವಿವಿಧ ಯೋಜನೆಗಳ ಕುರಿತು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಅಸಂಘಟಿತ ವಲಯದ ಕಾರ್ಮಿಕರು ಸಾಮಾಜಿಕ, ಆರ್ಥಿಕವಾಗಿ ದುರ್ಬಲರಾಗಿದ್ದು, ಸಂಘಟಿತ ಕಾರ್ಮಿಕರಿಗೆ ದೊರಕುವ ಕಾನೂನಾತ್ಮಕ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಅಂತಹ ಕಾರ್ಮಿಕರಿಗೆ ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ಒದಗಿಸುವುದು ಸರಕಾರದ ಕರ್ತವ್ಯವಾಗಿದೆ ಎಂದರು. 

ದೇಶದಲ್ಲಿ ದುಡಿಯುವ ವರ್ಗದಲ್ಲಿ ಶೇ.80ಕ್ಕಿಂತ ಹೆಚ್ಚು ಕಾರ್ಮಿಕರು ಅಸಂಘಟಿತ ವಲಯದಲ್ಲಿ ಇದ್ದಾರೆ ಎಂಬುದು ಅಂದಾಜಿಸಲಾಗಿದೆ. ಕಾರ್ಮಿಕರಿಗಾಗಿ ಮೂರು ಬಿಲ್ ಎಂಬ ಯೋಜನೆ ಜಾರಿಗೆ ತರಲಾಗಿದೆ. ಗಿಡ್ ಬಿಲ್ ಇದು ಬೆಂಗಳೂರು ನಗರದಂತಹ ಅಭಿವೃದ್ದಿ ಹೊಂದಿದ ನಗರದಲ್ಲಿ ಆನ್‌ಲೈನ್ ಕಂಪಬಿಗಳಲ್ಲಿ ಸೇಲ್ಸ್‌ ಮ್ಯಾನ್, ಡಿಲೇವಾರಿ ಕಾರ್ಮಿಕರಿಗೆ ಉಪಯುಕ್ತ ಯೋಜನೆಗಾಗಿದೆ. 5 ಲಕ್ಷದಷ್ಟು ಕಾರ್ಮಿಕರು ಇದರ ಪ್ರಯೋಜನ ಪಡೆದಿದ್ದಾರೆ. ಸಿನಿ ಬಿಲ್ ಇದರಲ್ಲಿ ಚಿತ್ರರಂಗದ ಲೈಟ್ ಬಾಯ್ ಹಿಡಿದು ನಾಯಕ ನಟ, ನಿರ್ದೇಶಕ ಹಾಗೂ ಸಹ ಕಲಾವಿದರನ್ನುಯ ಗುರುತಿಸಿ ಅಲ್ಲದೇ ರಂಗಭೂಮಿ ಕಲಾವಿದರು ಹಾಗೂ ಕಂಪನಿಗಳಿಗಳಲ್ಲಿ ಕೆಲಸ ಮಾಡುವವರಿಗೆ ಅನುಕೂಲವಾಗಲಿದೆ ಎಂದರು. 

ಟ್ರಾನ್ಸಪೋರ್ಟ ಬಿಲ್ ಇದರಲ್ಲಿ ಚಾಲಕರು, ಕ್ಲೀನರ್, ಪಂಚರ, ಗ್ಯಾರೇಜನಲ್ಲಿ ಕಾರ್ಯನಿರ್ವಹಿಸುವ ಹಾಗೂ ಪೆಂಟಿಂಗ್ ಕೆಲಸದಲ್ಲಿ ತೊಡಗಿರುವವರಿಗೆ ಅನುಕೂಲವಾಗುವ ಯೋಜನೆಯಾಗಿದ್ದು, ಇದರಲ್ಲಿ ಈಗಾಗಲೇ 25 ಲಕ್ಷ ಜನರಿಗೆ ಸ್ಮಾರ್ಟಕಾರ್ಡ ವಿತರಿಸಲಾಗಿದೆ. ಅಲ್ಲದೇ ಅಪಘಾತದಲ್ಲಿ ಮರಣ ಹೊಂದಿದ ಚಾಲಕರಿಗೆ 5 ಲಕ್ಷ ರೂ,ಗಳ ವಿಮೆ ನೀಡಲಾಗುತ್ತಿದೆ. ಒಟ್ಟಾರೆ ಕಾರ್ಮಿಕರಿಗೆ ಅನುಕೂಲವಾಗುವಂತಹ ಅಂಬೇಡ್ಕರ ಕಾರ್ಮಿಕರ ಸಹಾಯಹಸ್ತ, ವಾಣಿಜ್ಯ ಸಾರಿಗೆ ಕಾರ್ಮಿಕರ ಅಪಘಾತ ಪರಿಹಾರ ಯೋಜನೆ, ರಾಜ್ಯ ಗಿಗ್ ಕಾರ್ಮಿಕರ ವಿಮಾ ಯೋಜನೆ, ದಿನಪತ್ರಿಕೆ ವಿತರಣಾ ಕಾರ್ಮಿಕ ಅಪಘಾತ ಪರಿಹಾರ, ವೈದ್ಯಕೀಯ ಸೌಲಭ್ಯ, ರಾಜ್ಯ ಮೋಟಾರ ಸಾರಿಗೆ ಹಾಗೂ ಇತರೆ ಕಾರ್ಮಿಕರ ಸಾಮಾಜಿಕ ಭದ್ರತೆ ಸೇರಿದತೆ ಇತರೆ ಸೌಲಭ್ಯಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದರು. 

ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್‌.ಬಿ.ತಿಮ್ಮಾಪೂರ ಮಾತನಾಡಿ ಜೀವನಕ್ಕೆ ಉಪಯುಕ್ತ ಕಾರ್ಯನಿರ್ವಹಿಸುವಲ್ಲಿ ದುಡಿಯುವ ಕಾರ್ಮಿಕರ ಕಾರ್ಯ ಮಹತ್ವದ್ದಾಗಿದ್ದು, ಅಂತಹ ಕಾರ್ಮಿಕರು ನೆಮ್ಮದಿಯಿಂದ ಪರಾವಲಂಬಿಗಳಾಗದೇ ಆರ್ಥಿಕವಾಗಿ, ಸಾಮಾಜಿಕವಾಗಿ ಮುಂದೆ ಬರಲಿ ಎಂಬ ಕಾರ್ಮಿಕ ಇಲಾಖೆ ಹಲವಾರು ಕಾರ್ಯಕ್ರಮ ಹಾಕಿಕೊಂಡಿದೆ. ಬೆವರು ಸುರಿಸಿ ರಕ್ತ ಹರಿಸಿ, ಹಗಲಿರುಳು ದುಡಿದು ಯಜಮಾನನನ್ನು ಶ್ರೀಮಂತನಾಗಿಸುವಲ್ಲಿ ಕಾರ್ಮಿಕರು ನೋವು ಉಂಡು ನಲಿವು ಹಂಚಿದರವಾಗಿದ್ದಾರೆ. ಈ ನಿಟ್ಟಿನಲ್ಲಿ ರಾಜ್ಯದಲ್ಲಿಯೇ ಬಾಗಲಕೋಟೆ ಜಿಲ್ಲೆ ಕಾರ್ಮಿಕರಿಗೆ ಅತೀ ಹೆಚ್ಚು ಯೋಜನೆಗಳು ತಲುಪುವಂತಾಗಲಿ ಎಂದರು. 

ಪ್ರಾರಂಭದಲ್ಲಿ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯ ಜಂಟಿ ಕಾರ್ಯದರ್ಶಿ ಡಾ.ಎಸ್‌.ಬಿ.ರವಿಕುಮಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಕಾರ್ಮಿಕರಿಗೆ ಸಾಂಕೇತಿಕವಾಗಿ ಸ್ಮಾರ್ಟ ಕಾರ್ಡಗಳನ್ನು ವಿತರಣೆ ಮಾಡಲಾಯಿತು.  

ಬೀಳಗಿ ಶಾಸಕ ಹಾಗೂ ಹಟ್ಟಿ ಚಿನ್ನದ ಗಣಿ ನಿಯಮಿತದ ಅಧ್ಯಕ್ಷ ಜೆ.ಟಿ.ಪಾಟೀಲ, ಶಾಸಕ ಹಾಗೂ ರಾಜ್ಯ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ, ಬಾದಾಮಿ ಶಾಸಕ ಭೀಮಸೇನ ಚಿಮ್ಮನಕಟ್ಟಿ, ನಗರಸಭೆ ಅಧ್ಯಕ್ಷೆ ಸವಿತಾ ಲೆಂಕನ್ನವರ, ಮಾಜಿ ಶಾಸಕ ಎಸ್‌.ಜಿ.ನಂಜಯ್ಯನವರ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮಾಜಿ ಮೇಯರ್ ಅನೀಲಕುಮಾರ ಪಾಟೀಲ, ಕಾರ್ಮಿಕ ಇಲಾಖೆಯ ಬೆಳಗಾವಿ ಪ್ರಾದೇಶಿಕ ಉಪ ಆಯುಕ್ತ ಡಿ.ಜಿ.ನಾಗೇಶ, ಸಹಾಯಕ ಕಾರ್ಮಿಕ ಆಯುಕ್ತ ಕೆ.ಬಿ.ನಾಗರಾಜ, ಜಿಲ್ಲಾಧಿಕಾರಿ ಸಂಗಪ್ಪ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯಲ್, ಜಿ.ಪಂ ಸಿಇಓ ಶಶಿಧರ ಕುರೇರ, ಜಿಲ್ಲಾ ಕಾರ್ಮಿಕ ಅಧಿಕಾರಿ ರಮೇಶ ಸುಂಬಡ, ಕಾರ್ಮಿಕ ನೀರೀಕ್ಷಕರಾದ ರಾಜಶೇಖರ ಕುರಡಿಕೇರಿ, ರಮೇಶ ವಂಗಿ, ರಾಕೇಶ ಶಿರಕನಹಳ್ಳಿ, ಅಶೋಕ ವಡ್ಡರ ಸೇರಿದಂತೆ ಇತರರು ಉಪಸ್ಥಿತರಿದ್ದರು.